Thursday 1 September 2011

ಸಂಸ್ಕೃತ ನಾಟಕಗಳಲ್ಲಿ ಮಕ್ಕಳ ಪಾತ್ರಗಳು - ಒಂದು ಪ್ರವೇಶಿಕೆ


ಸಂಸ್ಕೃತ ನಾಟಕಗಳಲ್ಲಿ ಮಕ್ಕಳ ಪಾತ್ರಗಳು - ಒಂದು ಪ್ರವೇಶಿಕೆ
'ನಾಟಕ ಬದುಕಿನ ಕನ್ನಡಿ' ಎಂದೊಡನೆಯೇ ಬದುನಲ್ಲಿನ ಎಲ್ಲ ಬಗೆಯ ಪಾತ್ರಗಳೂ ನಾಟಕದ ಅನಿವಾರ್ಯ ಅಂಗಗಳಾಗಿರುತ್ತವೆ. ದೊಡ್ಡವರಂತೆಯೇ ಮಕ್ಕಳೂ ನಾಟಕದ ಅಂಗಗಳಾಗಿರುತ್ತಾರೆ. ಮಕ್ಕಳ ನಾಟಕಗಳು ಎನ್ನುವುದು ಇತ್ತೀಚಿನ ಪರಿಕಲ್ಪನೆ, ಹಾಗು ಅದು ಪಾಶ್ಚಾತ್ಯ ಚಿಂತನೆಯಿಂದ ಪ್ರಭಾವಿತವಾದುದು. ಭಾರತೀಯ ನಾಟಕ ಪರಂಪರೆಯಲ್ಲಿ ಮಕ್ಕಳಿಗಾಗಿ ಬರೆಯಲಾದ ನಾಟಕಗಳು ಕಂಡುಬರುವುದಿಲ್ಲವಾದರೂ, ನಾಟಕಗಳಲ್ಲಿ ಮಕ್ಕಳು ಕಥೆಯ ತಿರುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು ಕಂಡುಬರುತ್ತವೆ. ಉಪನಿಷತ್ತುಗಳಲ್ಲಿ ಕಲಿಯುವ ತುದಿಯಲ್ಲಿರುವ ಶಿಷ್ಯ ಬಾಲಕನೇ ಆಗಿದ್ದಾನೆ. ಕಲಿಸುವ ತುದಿಯಲ್ಲಿರುವ ಗುರು ಕಥೆಯ ಫಲನಗಳನ್ನು ನಿರ್ವಚಿಸುತ್ತಾನಾದರೂ ಕಥೆಯ ಕೇಂದ್ರ ಮತ್ತು ಫಲಿತಗಳು ಶಿಷ್ಯನನ್ನೇ ಓಲೈಸುತ್ತವೆ. ಉಪನಿಷತ್ತುಗಳ ಈ ಅಂಶಗಳಿಂದ ಕಥನ ಕ್ರಿಯೆಯಲ್ಲಿ ಬಾಲಕರ ಪಾತ್ರದ ಗುರುತರತೆಯನ್ನು ಭಾವಿಸಿಕೊಳ್ಳಬಹುದು. ಇನ್ನಿತರೆ ಗದ್ಯ ಪದ್ಯಾದಿ ಕಾವ್ಯಗಳಲ್ಲಿಯೂ ಬಾಲಕರನ್ನು ಚಿತ್ರಿಸಿರುವ ರೀತಿಯು ವೀರಾವೇಶ ಕೂಡಿದವಾಗಿ, ನ್ಯಾಯ ನೀತಿಯನ್ನು ಅನುಸರಿಸುವವರಾಗಿ, ಗುರುಹಿರಿಯರಲ್ಲಿ ಗೌರವಭಾವನೆ ಹೊಂದಿದವರಾಗಿ ಚಿತ್ರಿಸಲಾಗಿದೆ. ಈ ಬಗೆಯ ಚಿತ್ರಣಗಳು ಭಾರತೀಯ ಸಂಸ್ಕೃತಿಯ ಬಹುಮುಖ್ಯ ಬಾಲಕ ಕೇಂದ್ರಿತ ಪಾತ್ರ ಪೋಷಣೆಯ ಅಗತ್ಯ ಅಭ್ಯಾಸವಾಗಿದೆ. ನಾಟಕಗಳ ಮೂಲವನ್ನು ಡಾ.ರಿಡ್ಜ್ವೇ ಗುರುತಿಸುವಂತೆ 'ಸಂಸ್ಕೃತ ನಾಟಕಗಳು ಮೂಲತಃ 'ವೀರಪೂಜೆ'ಗೆ ಸಂಬಂಧಿಸಿದ ಆಚಣೆಯ ಅಂಗಗಳು. ರಾಮಲೀಲಾ ಹಾಗು ಕೃಷ್ಣಲೀಲಾ ಮುಂತಾದವುಗಳು (ಗ್ರೀಕ್ ನಾಟಕಗಳಂತೆ) ಗತಿಸಿದ ವೀರರುಗಳಿಗೆ ಗೌರವಸಲ್ಲಿಸುವ ಪ್ರವೃತ್ತಿ ಮತ್ತು ಸಿದ್ಧಾಂತಗಳನ್ನು ಪುಷ್ಟೀಕರಿಸುವ ಉಜ್ವಲ ದೃಷ್ಟಾಂತಗಳು'.ಎಂಬ ಅವರ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗದಿದ್ದರೂ ಈ ಚಿಂತನೆಗೆ ಪುಷ್ಟಿ ಕೊಡುವಂತೆ ಕಥನಗಳಲ್ಲಿಯ ಬಾಲಕ ಪಾತ್ರಗಳಾದ ರಾಮ-ಲಕ್ಷ್ಮಣರು, ಲವ-ಕುಶರು, ಭೀಮಾರ್ಜುನರು, ಕೃಷ್ಣ, ಗಣೇಶ-ಸುಬ್ರ್ರಹ್ಮಣ್ಯ, ಮುಂತಾದವರುಗಳು ಬದುಕಿನ ವಿವಿಧ ಸನ್ನಿವೇಶಗಳಲ್ಲಿ ನಡೆದುಕೊಳ್ಳುವ ವೀರೋಚಿತ ಬಗೆಯನ್ನು ಮುಂಬರುವ ಯುವ ಜನಾಂಗ ಕಲಿಯಲಗತ್ಯವಾದ ಮಾದರಿ ಬಗೆಯಾಗಿ ಕಾಣಿಸಲಾಗಿದೆ.
ನಾಟಕಗಳಲ್ಲಿಯೂ ಇದೇ ಮಾದರಿ ಮುಂದುವರೆದಿದೆ. ಕಥನ ಶೈಲಿಯಲ್ಲೇ ಬಹುತೇಕ ನಾಟಕಗಳೂ ರಚಿತವಾಗಿರುವುದರಿಂದ ಕಾವ್ಯದಲ್ಲಿ ಸಾಧ್ಯವಾಗುವ ನಿರೂಪಣಾ ಅಂಶವು ನಾಟಕದ ಪಾತ್ರವಾಗಿ ಪರಿವರ್ತಿತವಾಗಿರುತ್ತವೆ. ಮೂಲ ಉದ್ದೇಶಗಳಲ್ಲಿ ಭಿನ್ನ ಆಲೋಚನೆ ಇರುವುದಿಲ್ಲವಾದ್ದರಿಂದ ಚರ್ಚಿತ ಮಾದರಿಯೇ ಮುಂದುವರೆದಿದೆ. ನಾಟಕಕಾರರುಗಳ ಉದ್ದೇಶವು ಕೇವಲ ಮನೋರಂಜನೆಯಾಗಿರದೇ ಜನತೆಯ ಚಾರಿತ್ರ್ಯವನ್ನು ಸುಧಾರಿಸುವ ಪ್ರಯತ್ನಗಳು ಇವಾಗಿರುವುದರಿಂದ ಸಿದ್ಧ ಮಾದರಿಯು ರಚಿತವಾಗಿದೆ. 'ಲೋಕವೃತ್ತ'ದ (ಮಾನವನ ಬದುಕಿನ ಒಳಗು ಹೊರಗುಗಳು) ಅನುಕರಣೆಯೇ ನಾಟಕ ಅಲ್ಲವೇ. ಸಂಸ್ಕೃತ ನಾಟಕಗಳ ವಾತಾವರಣವು ಅತ್ಯಂತ ಸಭ್ಯ, ಶಿಷ್ಟ ಮತ್ತು ಉದಾತ್ತವಾಗಿದೆ. ಆದುದರಿಂದಲೇ ಅಶ್ಲೀಲತೆ, ಜುಗುಪ್ಸೆ ಹಾಗು ಅರುಚಿಯನ್ನು ಉತ್ಪನ್ನಮಾಡುವ ದೃಶ್ಯಗಳೆನಿಸಿರುವ ವಧೆ, ಮೋಸ, ಭೋಜನ, ಸ್ನಾನ, ಸುರತ, ಅನುಲೇಪನ ಇತ್ಯಾದಿಗಳನ್ನು ನಿಷೇಧಿಸಲಾಗಿದೆ (ದಶರೂಪಕ 3-34,35). ಈ ಎಲ್ಲ ವಿವರಗಳೂ ಸಂಸ್ಕೃತ ನಾಟಕಗಳಲ್ಲಿ ಬಾಲಕರ ಪಾತ್ರಗಳನ್ನು ವಿವೇಚಿಸಿರುವ ಬಗೆಯನ್ನು ಹಾಗು ಅದರ ಹಿಂದಿನ ಮೂಲ ಉದ್ದೇಶವನ್ನು ಗುರುತಿಸಬಹುದು. ಹಾಗೆ ನೋಡಿದರೆ ಸಂಸ್ಕೃತದಲ್ಲಿ ರಚಿತವಾದ ನಾಟಕಗಳಲ್ಲಿ ಬಾಲಪಾತ್ರಗಳನ್ನು ಚಿತ್ರಿಸಿರುವಲ್ಲಿ ರಾಮಾಯಣದ ಕಥೆಯನ್ನು ಆಯ್ದು ದೃಶ್ಯರೂಪವಾಗಿ ರಚಿಸಲಾದುದೇ ಹೆಚ್ಚು. ರಾಮನ ಬಾಲ್ಯ, ಲವ ಕುಶರ ಪಾತ್ರಗಳು ಸುಮಾರು 2000 ವರ್ಷಗಳ ಬಾಲಕರ ಮನಸ್ಸನ್ನು ಗೆದ್ದ ಪಾತ್ರಗಳಾಗಿವೆ. ಆದರೆ ಮಹಾಭಾರತವನ್ನು ಆಧರಿಸಿದ ನಾಟಕಗಳು ಬಾಲಕ ಪಾತ್ರದ ನಿರ್ವಚನೆಗಳು ಅತ್ಯಲ್ಪ. ಬಾಲ್ಯದ ಕಥೆಗಳು ಮಹಾಭಾರತದಲ್ಲಿ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿರುವುದರ ಕಾರಣವಿರಬಹುದೇನೋ.
ಸಂಸ್ಕೃತ ನಾಟಕಗಳಲ್ಲಿ ಬಿಂಬಿತವಾಗಿರುವ ಬಾಲಕ-ಬಾಲಕೀಯರ ಪಾತ್ರಗಳನ್ನು ಸ್ಥೂಲವಾಗಿ ಚರ್ಚಿಸುವುದಾದರೆ, ಅತಿ ಪ್ರಾಚೀನ ನಾಟಕಕಾರನೆನಿಸಿದ ಭಾಸ ರೂಪಿಸಿದ ಬಾಲಕರ ಪಾತ್ರಗಳು ವೀರೋಚಿತವಾದವುಗಳು. ಮಧ್ಯಮ ವ್ಯಾಯೋಗದ ಮೂರು ಮಕ್ಕಳ ಪಾತ್ರಗಳು ಕುಟುಂಬಕ್ಕಾಗಿ ಪ್ರಾಣತ್ಯಾಗಕ್ಕೆ ಸಿದ್ಧರಾಗಿ ನಿಂತ ಪಾತ್ರಗಳು. ಘಟೋದ್ಕಚನ ಪಾತ್ರವೂ ಸಹ ಬಾಲಭಾವದಲ್ಲಿಯೇ ಚಿತ್ರಿತವಾದರೂ ಯೌವನದ ಮೊದಲ ಹೆಜ್ಜೆಗಳ ಗುರುತುಗಳು ಬಿಂಬಿತವಾಗಿದೆ. ಬಾಲಚರಿತದಲ್ಲಿ ಕೃಷ್ಣನ ಪಾತ್ರದ ಮೂಲಕ ಅವನ ಬಾಲಲೀಲೆಗಳು, ಮತ್ತು ದೈವೀಕಚರ್ಯೆಗಳು ಬಿಂಬಿತವಾಗಿದೆ. ಊರುಭಂಗದಲ್ಲಿನ ದುರ್ಜಯನ ಪಾತ್ರವು ನಾಟಕಕ್ಕೆ ದುರಂತದ ನೋಟವನ್ನು ದಕ್ಕಿಸಿಕೊಡುತ್ತದೆ. ಶೂದ್ರಕನ ಮೃಚ್ಛಕಟಿಕದ ರೋಹಸೇನನ ಪಾತ್ರ ಕನಸುಗಳನ್ನು ಕಸಿದುಕೊಳ್ಳುವ ಬಡತನದ ದಾರುಣತೆಯನ್ನು ತಿಳಿಸುತ್ತದೆ. ಕಾಳಿದಾಸನ ಮಾಲವಿಕಾಗ್ನಿ ಮಿತ್ರ ನಾಟಕದಲ್ಲಿನ ವಸುಮತಿಯ ಪಾತ್ರ ತನ್ನ ಬಾಲಭಾವದಿಂದಾಗಿ ಅಗ್ನಿಮಿತ್ರನಿಗೆ ತನ್ನ ಪ್ರಣಯವನ್ನು ಗುರುತಿಸಿಕೊಳ್ಳಲು ಉತ್ತಮ ಪುರಾವೆಯನ್ನೊದಗಿಸುವ ಪಾತ್ರವಾಗಿ ಬಳಕೆಯಾಗಿದೆ. ಕಾಳಿದಾಸನದೇ ಆದ ವಿಕ್ರಮೋರ್ವಶೀಯದ ಆಯುವಿನ ಪಾತ್ರ ವೀರ ಬಾಲಕನ ಮಾದರಿಯನ್ನು ಮುಂದಿಡುತ್ತದೆ. ಅಭಿಜ್ಞಾನ ಶಾಕುಂತಲ ನಾಟಕದ ಸರ್ವದಮನನ ಪಾತ್ರ ದುಷ್ಯಂತ ಶಕುಂತಲೆಯರ ಮಿಲನದ ದ್ಯೋತಕವಾಗಿದೆ. ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿ ಕಂಡುಬರುವ ಲವ ಮತ್ತು ಕುಶರು ತಮ್ಮ ಪರಾಕ್ರಮವನ್ನು ತೋರಿ ಲಕ್ಷ್ಮಣನನ್ನು ಸೋಲಿಸುವ ಪ್ರಸಂಗ ಬಾಲಕರುಗಳಿಗೆ ಸ್ಫೂರ್ತಿದಾಯಿಯಾಗುವಂತೆ ಚಿತ್ರಿತವಾಗಿದೆ. 18ನೇ ಶತಮಾನದ ಕಲ್ಯದ ಲಕ್ಷ್ಮೀ ನೃಸಿಂಹನು ಸಹ ಇದೇ ವಸ್ತುವನ್ನಿಟ್ಟುಕೊಂಡು ಜನಕ ಜಾನಂದಮ್ ಎಂಬ ಪೂರ್ಣಪ್ರಮಾಣದ ನಾಟಕವನ್ನು ಬರೆದು ಲವ-ಕುಶ ಮತ್ತು ಶ್ರೀರಾಮಚಂದ್ರನ ವಾಗ್ವಾದದಲ್ಲಿ ತಂದೆ ಮಕ್ಕಳ ಭಿನ್ನ ಬಗೆಯನ್ನು ಮನೋಜ್ಞವಾಗಿ ವರ್ಣಿಸಿದ್ದಾನೆ. ವಿಶಾಖದತ್ತನ ಮುದ್ರಾರಾಕ್ಷಸ ನಾಟಕದಲ್ಲಿನ ಚಂದನದಾಸನ ಮನೆಯಲ್ಲಿ ಅಮಾತ್ಯರಾಕ್ಷಸನ ಮಗ ಚಿಕ್ಕಹುಡುಗನ ಪ್ರವೇಶ ನಾಟಕದ ಪ್ರಮುಖ ಘಟ್ಟವನ್ನು ತೆರೆದಿಡುತ್ತದೆ. ರಾಜಶೇಖರನು ಬಾಲ ರಾಮಾಯಣ ಹಾಗು ಬಾಲಭಾರತಗಳು ಬಾಲಕರಿಗೆ ಎಂದು ತಿಳಿಸುವಂತಿದ್ದರೂ ನಾಟಕ ಪ್ರೌಢವಾಗಿದೆ. ವಿದ್ಧಸಾಲಭಂಜಿಕೆಯಲ್ಲಿ ಬಳಸಿಕೊಳ್ಳಲಾದ ಮರದ ಬೊಂಬೆಗಳು ಮಾತನಾಡುವ ದೃಶ್ಯ ಬಾಲಕರಿಗೂ ಉತ್ತಮ ಮನರಂಜನೆಯನ್ನು ಒದಗಿಸುತ್ತದೆ. ಜಯದೇವನು ತನ್ನ ಪ್ರಸನ್ನ ರಾಘವ ನಾಟಕದ ಮೊದಲಿನಲ್ಲಿ ಬಾಲಕಾಂಡದ ಕಥೆಯ ನಾಟಕೀಯ ನಿರ್ವಚನೆಯಲ್ಲಿ ರಾಮನ ಆದರ್ಶ ಚಾರಿತ್ರ್ಯವನ್ನು ಬಹುವಾಗಿ ಪ್ರಶಂಸಿದ್ದಾನೆ.
ಸಂಸ್ಕೃತ ನಾಟಕಗಳಲ್ಲಿ ಪಾತ್ರಗಳಾದ ಮಕ್ಕಳು ಮುದ್ದುಮುದ್ದಾಗಿ ಕಾಣಿಸಿಕೊಳ್ಳುವುದು ಅಥವಾ ವೀರತ್ವದಲ್ಲಿ ಕಾಣಿಸಿಕೊಳ್ಳುವುದನ್ನು ಇನ್ನಷ್ಟು ಹೆಚ್ಚು ಆಳವಾಗಿ ಅಧ್ಯಯನ ಮಾಡಿ ಹೊರತೆಗೆದರೆ ಮಕ್ಕಳಿಗಾಗಿ ಬರೆದ ಎಲ್ಲವೂ ಅಧ್ಯಯನ ಮಾರ್ಗವನ್ನು ಬೋಧಿಸಲೆಂದೇ ಹೊರತು ಸಮಾಜದ ಪ್ರಮುಖ ಧಾರೆಗೆ ಮೌಲಿಕ ಕೊಡುಗೆಯನ್ನು ಕೊಡುವವರಂತೆ ಕಾಣಿಸಲಾಗಿಲ್ಲ ಎಂಬುದು ತಿಳಿದುಬರುತ್ತದೆ.

0 ಅಭಿಪ್ರಾಯಗಳು:

Post a Comment

Followers

ನನ್ನ ಸಂಗ್ರಹದ ಚಿತ್ರಗಳು

Loading...